ಚೆನ್ನೈ, ಜ ೨೯, ಡಿಸ್ಕವರಿ ಚಾನೆಲ್ ನ ‘ ಮ್ಯಾನ್ ವರ್ಸಸ್ ವೈಲ್ಡ್ ‘ ಕಾರ್ಯಕ್ರಮದ ಚಿತ್ರೀಕರಣದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಂಗಳವಾರ ಪಾಲ್ಗೊಂಡಿದ್ದರು. ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಹಲವೆಡೆ ಕಾರ್ಯಕ್ರಮದ ಚಿತ್ರೀಕರಣ ನಡೆದಿತ್ತು. ಚಿತ್ರೀಕರಣದ ವೇಳೆ ರಜನಿಕಾಂತ್ ಅರಣ್ಯ ಪ್ರದೇಶದಲ್ಲಿ ಜಾರಿ ಬಿದ್ದು ಅವರ ಭುಜಕ್ಕೆ ಗಾಯಗಳಾಗಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಅಂತಹದ್ದು ಏನು ನಡೆಯಲಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.ಕಾರ್ಯಕ್ರಮದ ಶೂಟಿಂಗ್ ಮುಗಿಸಿಕೊಂಡು ಚೆನ್ನೈಗೆ ವಾಪಾಸ್ಸಾಗಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಣ್ಣ ಮುಳ್ಳಿನ ಗಿಡದ ಮೇಲೆ ಜಾರಿ ಬಿದ್ದ ಕಾರಣ ದೇಹದ ಮೇಲೆ ಗೀಚಿದಂತಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ರೀತಿಯ ಗಾಯಗಳಿಲ್ಲ ಎಂದು ರಜನೀಕಾಂತ್ ಹೇಳಿದ್ದಾರೆ.